logo

ಆನಂದದ ಜೀವನ ಶೈಲಿಗೆ ಸ್ವಚ್ಛ ಶೌಚಾಲಯ ಆರೋಗ್ಯ ರಕ್ಷಾ ಕವಚ... ಕುಂದಾಣದಲ್ಲಿ ಜಿಲ್ಲಾಮಟ್ಟದ ವಿಶ್ವ ಶೌಚಾಲಯ ದಿನಾಚರಣೆ

ದೇವನಹಳ್ಳಿ: ಆನಂದದ ಜೀವನ ಶೈಲಿಗೆ ಸ್ವಚ್ಛ ಶೌಚಾಲಯ ಆರೋಗ್ಯ ರಕ್ಷಾ ಕವಚವಿದ್ದಂತೆ, ಪ್ರತಿಯೊಬ್ಬರು ಸರಿಯಾದ ನೈರ್ಮಲ್ಯ ಪಡೆಯುವುದು ಮೂಲಭೂತ ಹಕ್ಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ಕುಂದಾಣ ಗ್ರಾಪಂ ಸಹಯೋಗದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ನ.೧೯ ರಿಂದ ಡಿ.೧೦ ರವರೆಗೆ ಜಿಲ್ಲಾದ್ಯಂತ ವಿಶೇಷ ಆಂದೋಲನವನ್ನು ಹಮ್ಮಿಕೊಂಡು ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಕಾಯಿಲೆಗಳನ್ನು ಹರಡುತ್ತದೆ. ಈ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ಬೇಕಿದೆ. ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡಿ ಜನರಲ್ಲಿ ಜಾಗೃತಿ ಮೂಡಿಸುವುದು ಆಂದೋಲನದ ಮುಖ್ಯ ಉದ್ದೇಶವಾಗಿದೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಸ್ವಚ್ಛತಾ ವಾಹನಕ್ಕೆ ಕೊಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವುದರಿಂದ ಪರಿಸರದಲ್ಲಿ ದುಶ್ಪರಿಣಾಮ ಬೀರಲಿದೆ ಇದರಿಂದ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಸಲಹೆ ಮಾಡಿದರು.

ಬಯಪ ಅಧ್ಯಕ್ಷ ವಿ.ಶಾಂತಕುಮಾರ್ ಮಾತನಾಡಿ, ವಿಶ್ವ ಶೌಚಾಲಯ ದಿನವು ಕಾರ್‍ಯಕ್ರಮಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬ ನಾಗರೀಕರು ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಠಿಸಲು ಆರೋಗ್ಯಕರವಾಗಿರಲು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಯಲು ಮಲವಿಸರ್ಜನೆಯಿಂದ ಅನೇಕ ರೋಗಗಳಿಗೆ ಕಾರಣವಾಗಬಹುದು. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಮುಖ್ಯವಾಗಿ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ. ಬಯಲು ಮಲವಿಸರ್ಜನೆಯು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವುದರಿಂದ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ. ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯದ ಸಮಸ್ಯೆ ಬರುವುದಿಲ್ಲ ಎಂದರು.
ಗ್ರಾಪಂ ಅಧ್ಯಕ್ಷೆ ನೇತ್ರವತಿ ನಾಗೇಶ್ ಮಾತನಾಡಿ, ವಿಶೇಷವಾಗಿ ಗ್ರಾಪಂ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶೌಚಾಲಯ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ಈಗಾಗಲೇ ಇರುವ ಶೌಚಾಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಮೊದಲು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಜಿಪಂ ಯೋಜನಾಧಿಕಾರಿ ವಿಠಲ್‌ಕಾವ್ಳೆ, ತಾಪಂ ಇಒ ಶ್ರೀನಾಥ್‌ಗೌಡ, ಮೈತ್ರಿ ಸೇವಾ ಸಂಸ್ಥೆ ನಿರ್ದೇಶಕ ಹರೀಶ್, ಉಪತಹಶೀಲ್ದಾರ್ ಬಿ.ಎ.ಚೈತ್ರ, ಬಿಇಒ ಸೌಮ್ಯ, ಪಿಡಿಒ ಕುಮಾರ್, ಕಾರ್‍ಯದರ್ಶಿ ಉಷಾ, ಗ್ರಾಪಂ ಸದಸ್ಯರಾದ ಕ್ಯಾತೇಗೌಡ, ಕೆ.ವಿ.ಸ್ವಾಮಿ, ಮುನಿಯಪ್ಪ, ವೀಣಾರಾಣಿ ನವೀನ್‌ಕುಮಾರ್, ಸುಬ್ರಮಣಿ, ರಾಮಚಂದ್ರಪ್ಪ, ವರಲಕ್ಷ್ಮಮ್ಮ ರಘು, ಗ್ರಾಪಂ ಸಿಬ್ಬಂದಿ, ಸಾರ್ವಜನಿಕರು ಇದ್ದರು.

ಚಿತ್ರ: ಕುಂದಾಣ ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನದ ಅಂಗವಾಗಿ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನಕ್ಕೆ ಜಿಪಂ ಉಪಕಾರ್‍ಯದರ್ಶಿ ಟಿ.ಕೆ.ರಮೇಶ್ ಹಾಗೂ ಬಯಪ ಅಧ್ಯಕ್ಷ ವಿ.ಶಾಂತಕುಮಾರ್ ಚಾಲನೆ ನೀಡಿದರು.

ಚಿತ್ರ: ಕುಂದಾಣ ಗ್ರಾಮದಲ್ಲಿ ವಿಶ್ವ ಶೌಚಾಲಯ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಕಾರ್‍ಯಕ್ರಮಕ್ಕೆ ಜಿಪಂ ಉಪಕಾರ್‍ಯದರ್ಶಿ ಟಿ.ಕೆ.ರಮೇಶ್ ಹಾಗೂ ಬಯಪ ಅಧ್ಯಕ್ಷ ವಿ.ಶಾಂತಕುಮಾರ್ ಹಾಗೂ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ನಾಗೇಶ್ ಉದ್ಘಾಟಿಸಿದರು.

13
2561 views