logo

ರಮ್ಯಪುರಾಣಪುಣ್ಯಕಥೆಗಳು ಪದ್ಮಾವತಿಯೊಂದಿಗೆ ಶ್ರೀನಿವಾಸನ ಕಲ್ಯಾಣ ಮಾಡಿಸಿದ ಯಶೋಧ :-

#ರಮ್ಯಪುರಾಣಪುಣ್ಯಕಥೆಗಳು
ಪದ್ಮಾವತಿಯೊಂದಿಗೆ ಶ್ರೀನಿವಾಸನ ಕಲ್ಯಾಣ ಮಾಡಿಸಿದ ಯಶೋಧ :-

ದ್ವಾಪರ ಯುಗದ ಕೃಷ್ಣನ ತಾಯಿ ಯಶೋದೆಗೂ, ಕಲಿಯುಗದ ಶ್ರೀನಿವಾಸನಿಗೂ ಎತ್ತಣಿಂದ ಎತ್ತ ಸಂಬಂಧ ಎಂದು ಯೋಚಿಸ ಹೊರಟರೆ ಇದು ಭಗವಂತನ ಸಂಕಲ್ಪ. ಕೃಷ್ಣನ ವರದಿಂದ ಕಾರಣ ಜನ್ಮಳಾದ ಬಕುಳಾದೇವಿ.

ಕಾರ್ಯಕಾರಣಕ್ಕಾಗಿ ಭೃಗು ಮಹರ್ಷಿಯ ನಿಮಿತ್ತ ಮಾತ್ರ ಶಾಪದಿಂದ ಮಹಾ ವಿಷ್ಣು,ತನ್ನ ಪತ್ನಿ ಮಹಾಲಕ್ಷ್ಮಿಯನ್ನು ಹುಡುಕುವ ಸಲುವಾಗಿ ತನ್ನ ದಿವ್ಯ ರೂಪವನ್ನು ವೈಕುಂಠದಲ್ಲಿ ಬಿಟ್ಟು ಮಾನವ ಶರೀರದಿಂದ ಶ್ರೀನಿವಾಸನಾಗಿ
ಧರೆಯಲ್ಲಿ ಅವತರಿಸಿದನು. ಧರೆಗಿಳಿದ ಕಾರಣ ಮಾನವ ಸಹಜವಾಗಿ ಹಸಿವು ನೀರಡಿಕೆ ಗಳಿಂದ ಬಳಲಿ ಒಂದು ಮರದ ಕೆಳಗಿನ ಹುತ್ತದಲ್ಲಿ ಸೇರಿದನು.ತ್ರಿಲೋಕ ಸಂಚಾರಿ ಆದ ನಾರದರು, ಶ್ರೀನಿವಾಸನ ಹಸಿವು- ಬಾಯಾರಿಕೆ- ಬಳಲಿಕೆ ಗಳನ್ನು ತಿಳಿಸುವ ಸಲುವಾಗಿ ಕೊಲ್ಲಾಪುರಕ್ಕೆ ನಡೆದರು. ಪತಿಯ ಮೇಲಿನ ಕೋಪದಿಂದ ವೈಕುಂಠವನ್ನು ತೊರೆದು ಭೂಲೋಕದ ಕೊಲ್ಲಾಪುರ ದಲ್ಲಿ ನೆಲೆಯಾಗಿದ್ದ ಮಹಾಲಕ್ಷ್ಮಿಗೆ ಶ್ರೀನಿವಾಸ ಪಡುತ್ತಿದ್ದ ಕಷ್ಟವನ್ನು ತಿಳಿಸಿದರು ತನ್ನ ಪತಿ ಹಸಿವು ಬಳಲಿಕೆಯಿಂದ ಇರುವುದನ್ನು ತಿಳಿದು ಲಕ್ಷ್ಮಿಗೆ ಸಹಿಸಲಾಗಲಿಲ್ಲ. ಆಕೆಗೆ ಸಿಟ್ಟು ಇನ್ನೂ ಹೋಗಿರದ ಕಾರಣ ಅವಳು ಶ್ರೀನಿವಾಸ ಇದ್ದಲ್ಲಿಗೆ ಬರಲಿಲ್ಲ. ಆದರೆ, ದೇವಲೋಕದ ಬ್ರಹ್ಮ ಮತ್ತು ಶಿವನಲ್ಲಿ ಮೊರೆ ಹೋದಳು. ಆಲಿಸಿದ ಬ್ರಹ್ಮನು ಧೇನುವಾಗಿ, ಶಿವನು ಕರುವಾಗಿ ಭೂವಿಗೆ ಬಂದು ಚೋಳರಾಜನ ಗೋ ಶಾಲೆ ಸೇರಿದರು.

ಆ ನಂತರ ಗೋಶಾಲೆಯ ಹಸುಗಳ ಗುಂಪಿನಲ್ಲಿ ಸೇರಿಕೊಂಡು ಶ್ರೀನಿವಾಸನ ಆಶ್ರಯ ತಾಣವಾದ ಹುತ್ತದ ಬಳಿಗೆ ಬಂದ ಕಾಮಧೇನು ಹಾಲು ತುಂಬಿದ ಕೆಚ್ಚಲಿನಿಂದ ಶ್ರೀನಿವಾಸನ ಬಾಯಿಗೆ ಬೀಳುವಂತೆ ಹಾಲು ಸುರಿಸಿ ಹಸಿವು ತಣಿಸಿತು. ಆದರೆ ಒಂದೆರಡು ದಿನದೊಳಗೆ ಈ ವಿಷಯ ಚೋಳ ರಾಜನಿಗೆ ತಿಳಿದು ಅವನು ಗೋ ಶಾಲೆ ಯ ಗೋಪಾಲಕನಿಗೆ ಪರೀಕ್ಷಿಸಲು ಹೇಳಿದನು ಹುತ್ತದೊಳಗೆ ಹಾಲು ಸುರಿಸುತ್ತಿದ್ದ ಧೇನುವನ್ನು ಕಂಡು ಗೋಪಾಲನು ಸಿಟ್ಟಿನಿಂದ ಹಸುವಿಗೆ ಹೊಡೆಯಲು ಕೈಲಿದ್ದ ಕೋಲನ್ನು ಅದರ ಕಡೆಗೆ ಗುರಿಯಿಟ್ಟು ಬೀಸಿ ಒಗೆದನು ಬೀಸಿ ಬಂದ ಕೋಲಿನ ಪೆಟ್ಟು ಕಾಮಧೇನುವಿಗೆ ಬೀಳದಂತೆ ಶ್ರೀನಿವಾಸ ತನ್ನ ತಲೆಯನ್ನು ಅಡ್ಡ ಹಿಡಿದನು. ಆ ದೊಣ್ಣೆಯ ಬಲವಾದ ಪೆಟ್ಟು ಅವನ ಹಣೆಗೆ ಬಡಿಯಿತು. ಶ್ರೀನಿವಾಸನ ಹಣೆಗೆ ಬಲವಾದ ಪೆಟ್ಟು ಬಿದ್ದು ರಕ್ತ ಸುರಿಯಿತು. ನೋವಿನಿಂದ ನರಳ ತೊಡಗಿದ. ಈ ವಿಚಾರ ದೇವಲೋಕದಲ್ಲಿ ತಿಳಿದು ಚರ್ಚೆಯಾಯಿತು. ಗುರು ಬೃಹಸ್ಪತಿಗಳು ತಾವೇ ಶ್ರೀನಿವಾಸನಿಗೆ ಆರೈಕೆ ಮಾಡುವುದಾಗಿ ಹೊರಟ ಸಮಯದಲ್ಲಿ ನಾರದರು ಆಗಮಿಸಿ ಅವರೊಂದು ಸಲಹೆ ಕೊಟ್ಟರು. ಬೃಹಸ್ಪತಿಗಳೇ ನೀವು ಹೋಗಿ ಔಷಧಿ ಕೊಡಿ ಆದರೆ ಶ್ರೀನಿವಾಸ ನಿಗೆ ಆರೈಕೆ ಮಾಡಲು ಅಲ್ಲೊಬ್ಬ ತಾಯಿ ಕಾದಿ ದ್ದಾಳೆ. ಅವಳು ಶ್ರೀನಿವಾಸನ ಆರೈಕೆಯನ್ನು ಪ್ರೀತಿಯಿಂದ ಮಾಡುತ್ತಾಳೆ ಆ ಜವಾಬ್ದಾರಿಯ ನ್ನು ಅವಳಿಗೆ ಬಿಡಿ ಎಂದರು. ಅಲ್ಲಿದ್ದವರೆಲ್ಲ ಆಶ್ಚರ್ಯ ಚಕಿತರಾಗಿ ಇದೇನು ಶ್ರೀನಿವಾಸನಿಗೆ ತಾಯಿಯೇ ಯಾರು ಆಕೆ ಎಂದಾಗ, ನಾರದರು ದ್ವಾಪರ ಯುಗದ ನೆನಪು ಮಾಡಿದರು. ಮೂರು ಸಾವಿರ ವರ್ಷಗಳ ಹಿಂದೆ ಮಥುರಾ ನಗರದಲ್ಲಿ ವಸುದೇವ ದೇವಕಿಗೆ ಹುಟ್ಟಿದ ಮಗುವೆ ಶ್ರೀ ಕೃಷ್ಣ ಈ ಮಗುವನ್ನು ಕಂಸನದೃಷ್ಟಿಯಿಂದ ತಪ್ಪಿಸಲು, ವಿಷ್ಣುವಿನ ಆದೇಶದಂತೆ, ವಸುದೇವನು ಆಗ ತಾನೇ ಹುಟ್ಟಿದ ಹಸು ಗೂಸನ್ನು ಬುಟ್ಟಿಯಲ್ಲಿ ಹೊತ್ತು ತಂದು ಗೋಕುಲದ ಯಶೋಧ -ನಂದರ ಮನೆಯಲ್ಲಿ ಬಿಡುತ್ತಾನೆ. ಮುಂದೆ ಕೃಷ್ಣನು,ತಾಯಿ ಯಶೋಧೆಯ ಮುದ್ದಿನ ಆರೈಕೆಯಲ್ಲಿ ಬೆಳೆಯು ತ್ತಾನೆ. ಇತ್ತ ಮಧುರಾದಲ್ಲಿ ಕೃಷ್ಣನ ಸೋದರ ಮಾವ ಕಂಸನು ಕೃಷ್ಣನನ್ನು ಸಂಹರಿಸಲು ತಂತ್ರರೂಪಿಸಿ ಕೃಷ್ಣ - ಬಲರಾಮರನ್ನು ಮಥುರಾ ಕ್ಕೆ ಕರೆಸುವ ಸಲುವಾಗಿ ಕುಸ್ತಿ ಕಾಳಗ ಸ್ಪರ್ಧೆ ಏರ್ಪಡಿಸಿ ಅವರಿಗೆ ಬರಲು ಆಹ್ವಾನ ಕೊಟ್ಟು ಕರೆ ತರಲು ಅಕ್ರೂರನನ್ನು ಕಳಿಸಿದನು. ಕಂಸನ ಕುತಂತ್ರವನ್ನು ಬಲ್ಲ ಕೃಷ್ಣನು ಮಧುರಾಕ್ಕೆ ಬೇಕೆಂದೆ ಹೋಗಿ ಅಲ್ಲಿ ಕಂಸನ ಸಂಹಾರ ಮಾಡಿ ಹೆತ್ತವರಾದ ವಸುದೇವ - ದೇವಕಿಯ ರನ್ನು ಬಂದ ಮುಕ್ತಗೊಳಿಸಿದನು. ಆನಂತರ ಮತ್ತೆ ಅವನೆಂದೂ ಗೋಕುಲಕ್ಕೆ ಬರಲೇ ಇಲ್ಲ. ದೇಶದ ಉದ್ದಗಲಕ್ಕೂ ಸಂಚರಿಸುವುದೇ ಆಯಿತು.

ಎಷ್ಟೋ ವರ್ಷಗಳು ಕಳೆದ ಮೇಲೆ ಒಮ್ಮೆ ಯಶೋಧಾ ತಾಯಿ ಕೃಷ್ಣನ ಅರಮನೆಗೆ ಬಂದಾಗ ಅಷ್ಟಮಹಿಷಿಯರಲ್ಲದೆ ಅದರ ಮೇಲೆ ಮತ್ತೆ 16,000 ಕನ್ಯೆಯರನ್ನು ವಿವಾಹ ವಾದ ವಿಷಯ ತಿಳಿದು ಬೇಸರವಾಯಿತು. ಶ್ರೀ ಕೃಷ್ಣನ ಮದುವೆಯನ್ನು ತಾನೇ ಮುಂದೆ ನಿಂತು ಮಾಡಿ ಆ ಸಂಭ್ರಮ ವನ್ನು ಕಣ್ತುಂಬಿ ಕೊಳ್ಳುವ ಕನಸನ್ನು ಕಂಡಿದ್ದಳು. ಬೇಸರದಿಂದ ನೀನು ನನಗೆ ತಿಳಿಸದೆ ಮದುವೆಯಾಗಿರುವೆ ನೋಡುವ ಭಾಗ್ಯವನ್ನು ನನಗೆ ಕರುಣಿಸಲಿಲ್ಲ ಎಂದು ಕೃಷ್ಣ ನಿಗೆ ಹೇಳಿದಾಗ ಶ್ರೀ ಕೃಷ್ಣನು ತಾಯಿಗೆ ಬೇಸರ ಪಡಬೇಡ ಮುಂದಿನ ಕಲಿಯುಗದಲ್ಲಿ ನಿನ್ನ ಕೈಯಾರೆ ನನ್ನ ವಿವಾಹವನ್ನು ಸಂಭ್ರಮ ದಿಂದ ಮಾಡುವೆ ಎಂದು ವರ ಕೊಟ್ಟಿದ್ದ. ಅದರಂತೆ ಕಲಿಯುಗ ಕಾಲಿಟ್ಟಾಗ ಯಶೋದೆ ಸಪ್ತಗಿರಿ ಯಲ್ಲಿ ಬಕುಳಾದೇವಿಯಾಗಿ ಜನಿಸಿ ವರಾಹ ನಾತ ತಟದ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಬರುತ್ತಿರುವ ಆಕೆಯನ್ನು ನಾರದರು ದೇವಲೋಕ ದ ಸಭೆಯಲ್ಲಿದ್ದವರಿಗೆ ತೋರಿಸಿದರು.

ಇತ್ತ ಪೆಟ್ಟು ತಿಂದು ರಕ್ತ ಸುರಿಯುತ್ತಿದ್ದ ಶ್ರೀನಿವಾಸ ಒಬ್ಬನೇ ಪುಷ್ಕರಣಿಯ ಮೆಟ್ಟಿಲ ಮೇಲೆ ಕುಳಿತಿದ್ದನು. ಆಗತಾನೆ ಸ್ನಾನ ಮುಗಿಸಿ ಬಂದ ಬಕುಳಾದೇವಿ ಆತನನ್ನು ನೋಡಿ ಯಾರಪ್ಪ ನೀನು? ಎಲ್ಲಿಂದ ಬಂದಿರುವೆ? ಏನಿದು ನಿನ್ನ ಗಾಯ? ಎಂದೆಲ್ಲಾ ಕೇಳಿದಾಗ ಶ್ರೀನಿವಾಸನು ಅಮ್ಮಾ ಎಂದು ಕರೆಯುತ್ತಿ ದ್ದಂತೆ, ಬಕುಳಾ ದೇವಿಗೆ ಅಮ್ಮ ಎಂಬ ಶಬ್ದ ಕಿವಿಗೆ ಬೀಳುತ್ತಿದ್ದ ಹಾಗೆ ತಾಯಿಯ ಕರುಳು ಚುರುಕ್ ಎಂದಿತು. ಅಮ್ಮಾ ನನ್ನ ಹೆಸರು ಶ್ರೀನಿವಾಸ
ಸ್ವಲ್ಪ ಪೆಟ್ಟು ಬಿದ್ದಿದೆ ಎಂದನು ತಾಯಿಯ ಕರುಳು ಕೇಳಬೇಕಲ್ಲವೇ ಇದೇನು ಸಣ್ಣ ಗಾಯವೇ ? ಎಷ್ಟೊಂದು ರಕ್ತ ಸುರಿಯುತ್ತಿದೆ ಎಂದು ತನ್ನ ಸೀರೆಯ ಸೆರಗಿನ ಅಂಚನ್ನು ಹರಿದು ಹಣೆಗೆ ಕಟ್ಟಲು ಹೊರಟಾಗ ಅಮ್ಮ ತಡೆಯಿರಿ ಎಂದು ಧ್ವನಿ ಕೇಳಿದಾಗ ತಿರುಗಿ ನೋಡಿದಳು, ಕೈಯಲ್ಲಿ ಔಷಧಿ ಹಿಡಿದು ಧನ್ವಂತರಿಯಂತೆ ಒಬ್ಬ ವ್ಯಕ್ತಿ ನಿಂತಿದ್ದನು. ಆತ ಬೇರೆ ಯಾರೊ ಆಗಿರದೇ ದೇವಗುರು ಬೃಹಸ್ಪತಿ. ಆ ಔಷಧಿ ಯನ್ನು ಬಕುಳಾದೇವಿ ಕಟ್ಟಲು ಹಿಡಿದಿದ್ದ ಸೀರೆಯ ತುಂಡಿನೊಳಗೆ ಹಾಕಿ ಈಗ ಇದನ್ನು ಕಟ್ಟಿ ಎಂದನು. ಬಕುಳಾದೇವಿ ಔಷಧಿ ತುಂಬಿದ ಸೆರಗಿನ ಅಂಚನ್ನು ಶ್ರೀನಿವಾಸನ ಹಣೆಗೆ ಕಟ್ಟಿ, ಬಂದ ವ್ಯಕ್ತಿಯ ಕಡೆ ತಿರುಗಿ ಸಮಯಕ್ಕೆ ಸರಿಯಾಗಿ ಬಂದಿರುವೆಯಲ್ಲ ಇದು ಯಾವ ಜನ್ಮದ ಸಂಬಂಧವೂ ನಾಕಾಣೆ ಇವನು ಅಮ್ಮ ಎಂದು ಕರೆದಾಗಲೇ ನನಗೆ ನನ್ನ ಮಗ ಎಂದು ಅನಿಸುತ್ತಿದೆ.

ಹೀಗೆ ಆರೈಕೆ ಮಾಡುತ್ತಲೇ ಶ್ರೀನಿವಾಸನಿಗೆ ಯಾರಪ್ಪ ನೀನು ಎಲ್ಲಿಂದ ಬಂದಿರುವೆ ನಿನ್ನ ತಂದೆ ತಾಯಿ ಬಂಧು ಬಳಗ ಯಾರು ಎಂದೆಲ್ಲ ಕೇಳಿದಾಗ ಅಮ್ಮ ನನಗೂ ಯಾರು ಇಲ್ಲ ನೀನೇ ನನ್ನ ತಾಯಿ ಎಂದನು ಶ್ರೀನಿವಾಸ.
ತಾಯಿಯ ಮಮತೆ ಉಕ್ಕಿಬಂದು ಈ ರೀತಿ ಪೆಟ್ಟು ಮಾಡಿದವರು ಯಾರು ಅಂತ ಹೇಳು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಳು. ಹೋಗಲಿ ಬಿಡಮ್ಮ ಕಳೆದು ಹೋದ ವಿಚಾರ ಬೇಡ ಈಗ ಬೇಡ ನನಗೆ ಹಸಿವಾಗುತ್ತಿದೆ.
ಅಮ್ಮ ಈಗ ಹೇಳು ನಿನ್ನ ಮನೆ ಎಲ್ಲಿದೆ ನೀನು ಯಾರ ಜೊತೆ ಇರುವೆ ಎಂದನು
ಬಕುಳಾದೇವಿ ನನಗೂ ಯಾರು ಇಲ್ಲ ನಾನು ಒಬ್ಬಂಟಿಯಾಗಿರುವೆ ಎಂದಳು.
ಶ್ರೀನಿವಾಸ ಹೇಳಿದ ಯಾರೂ ಇಲ್ಲ ಎಂದು ಏಕೆ ಹೇಳುವೆ, ಭಗವಂತ ನಿನ್ನ ಜೊತೆಗಿರುತ್ತಾನೆ. ಏಕಾಂಗಿಯಾಗಿ ಯಾರು ಇರುವುದಿಲ್ಲ ಇನ್ನು ಮುಂದೆ ನಾನೇ ನಿನ್ನ ಮಗ ನೀನೇ ನನಗೆ ಅಮ್ಮ ಎಂದನು. ಈ ರೀತಿಯಾಗಿ ಅಮ್ಮ ಮಗನ ಬಾಂಧವ್ಯ ಮುಂದುವರೆಯಿತು. ತಾಯಿಯ ಆರೈಕೆಯಲ್ಲಿ ಶ್ರೀನಿವಾಸ ಚೇತರಿಸಿ ಕೊಂಡನು. ಮುಂದೆ ಆಕಾಶ ರಾಜನ ಮಗಳಾದ ಪದ್ಮಾವತಿ ಯೊಂದಿಗೆ ಮಗ ಶ್ರೀನಿವಾಸನ ಮದುವೆಯನ್ನು ಬಕುಳಾದೇವಿಯೇ ಮುಂದೆ ನಿಂತು, ಹಿಂದೆ ಅಂತ ಮದುವೆಯಾಗಿಲ್ಲ ಮುಂದೆ ಆಗುವುದಿಲ್ಲ ಅನ್ನುವ ಹಾಗೆ, ಶ್ರೀನಿವಾಸನು ತನ್ನ ಮದುವೆಗಾಗಿ ಕುಬೇರನ ಹತ್ತಿರ ಸಾಲ ಮಾಡಿ ಬಾರಿ ಮದುವೆಯನ್ನು ಸಂಭ್ರಮ ಸಡಗರದಿಂದ ಮಾಡಿ ಕೊಂಡನು. ಅಂತಹ ಶ್ರೀನಿವಾಸ ಪದ್ಮಾವತಿ ರ ಕಲ್ಯಾಣಕ್ಕೆ ಸಾಕ್ಷಿಯಾಗಿ ದ್ವಾಪರದ ಯಶೋದೆ ಕಲಿಯುಗದಲ್ಲಿ ಬಕುಳಾದೇವಿಯಾಗಿ ಆ ಸಂಭ್ರಮವನ್ನು ಕಣ್ತುಂಬಿ ಕೊಂಡಳು.

ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ !
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ಮಂಗಳಮ್ !!
ಸಂಗ್ರಹ
ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

0
0 views