ಕನ್ನಡ ಹರಿದಾಸ ಸಾಹಿತ್ಯ ಒಂದು ಅಗಾಧ ಜ್ಞಾನ ಭಂಡಾರ ಮೊದಲಕಲ್ಲು ಶ್ರೀ ಶೇಷದಾಸರು
ಕನ್ನಡ ಹರಿದಾಸ ಸಾಹಿತ್ಯ ಒಂದು ಅಗಾಧ ಜ್ಞಾನ ಭಂಡಾರ. ಆ ಸಾಹಿತ್ಯ ತನ್ನ ಒಡಲಲ್ಲಿ ಅದೇಷ್ಟೋ ನವರತ್ನಗಳಂತಹ ಮಹಾನ್ ಮಹಾನ್ ಸಾಧನ ಜೀವಿಗಳನ್ನು ನಮಗೆ ನೀಡಿದೆ. ಅವರುಗಳು ತಾವು ಸಾಧನೆ ಮಾಡಿಕೊಂಡಿದ್ದಲ್ಲದೇ ನಮ್ಮಂತಹವರನ್ನು ಸಾಧನೆಗೆ ಇದು ಹಾದಿ ಎಂದು ಸುಳಾದಿಗಳ ಮೂಲಕ ಸುಳಿವು ಕೊಟ್ಟು "ಘನ ದಯಾನಿಧಿ" ಅಂದರೆ ಗಟ್ಟಿಯಾದ ಎಂದಿಗೂ ತನ್ನ ಶಕ್ತಿಯನ್ನು ಕಳೆದುಕೊಳ್ಳದ ದಯೆಯ ನಿಧಿಯಾದ ಪ್ರಾಣದೇವರ ಮೂಲಕ ಪರಮಾತ್ಮನ ಅಣು ಅಣುವನ್ನು ಹೇಗೆ ನಾವುಗಳು ಸ್ಮರಿಸಬೇಕು, ಧ್ಯಾನಿಸಬೇಕು ಎಂಬುದನ್ನು ಸವಿಸ್ತಾರವಾಗಿ ಮೊದಲಕಲ್ಲು ಶ್ರೀ ಶೇಷದಾಸರು ತಮ್ಮ ಸುಳಾದಿಗಳಲ್ಲಿ ವರ್ಣಿಸಿದ್ದಾರೆ. ಅಂತಹ ದಾಸರ ಆರಾಧನೆಯ ಪರ್ವದಿನವಾದ ಇಂದು ಅವರ ಸ್ಮರಣೆ,ಸುಳಾದಿ, ಉಗಾಭೋಗಗಳ ಪಾರಾಯಣ ಪುಣ್ಯಕ್ಕೆ ಹೂರಣ.
ಈಗಿನ ತೆಲಂಗಾಣ ರಾಜ್ಯದ ಗದ್ವಾಲ್ ಹತ್ತಿರ ಬರುವ ಧರೂರು ಎಂಬ ಗ್ರಾಮದಲ್ಲಿ ಜನಿಸಿ, ಗದ್ವಾಲ್ ಆಸ್ಥಾನದಲ್ಲಿ ಕುಲಕರ್ಣಿ ವೃತ್ತಿಯನ್ನು ಮಾಡುತ್ತ ಒಂದು ದಿನ ನಡೆದ ಘಟನೆ ಅವರ ಇಡೀ ಜೀವನ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿತು. ಆಮೇಲೆ ಅವರು ಮೊದಲಕಲ್ಲನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿ ಮುಂದೆ ನಡೆದಿದ್ದೇಲ್ಲ ಇತಿಹಾಸವೇ.
ನಿನ್ಮ ಕಾಂಬುವದೇ ನಿಖಿಳ ಸೌಭಾಗ್ಯ ಪ್ರಾಪ್ತಿ | ನಿನ್ನ ಕಾಂಬುವದೆ ನಿತ್ಯಾನಂದ ಎನ್ನುತ್ತ ಹಿಂದಿನ ತಮ್ಮ ಒಡನಾಟದ ದಿನಗಳನ್ನು ಸ್ಮರಿಸುತ್ತಾರೆ.
ಮಿತ್ರನು ಎಂದು ನಿನ್ನ ಮನದಿ ನಂಬಿದದಕ್ಕೆ | ಉತ್ತಮ ಉಪಕಾರ ಮಾಡಿದಯ್ಯಾ ಎಂದು ಮತ್ತೊಂದು ಕಡೆ
ಇಷ್ಟು ನಿರ್ದಯವ್ಯಾಕೋ ಎಲೆ ಎಲೆ ಆಪ್ತನಾದ | ಕೃಷ್ಣ ನಿನಗೆ ನಾನು ದೂರದವನೆ ಎನ್ನುತ್ತ
ಶ್ರೀ ಕೃಷ್ಣ ಪರಮಾತ್ಮನ ಜೊತೆ ತಮಗಿದ್ದ ಒಡನಾಟವನ್ನು ವಿವರಿಸುತ್ತಾರೆ.
ಕಲಿಯುಗದಲಿ ಜನರು ಕಲಿ ಕಲ್ಮಷದಿಂದ | ಬಲವಂತವಾಗಿ ತ್ರಿವಿಧ ತಾಪಗಳನ್ನು|
ವಿಲಯಗೈಸುವ ಉಪಾಯವ ನರಿಯದೆ|
ಎನ್ನುವಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ವರ್ಣಿಸಿದ್ದಾರೆ.
ನಿನ್ನನುಗ್ರಹದಿಂದ ಧನ ಮೊದಲಾದ ವಸ್ತು | ತನ್ನಿಂದ ತಾನೆ ಬಂದು ಒದಗುತಿರೆ | ಇನ್ನಿದಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲ | ಬಿನ್ನಪವನು ಉಂಟು ಗ್ರಹಿಸಬೇಕು ಎಂಬುವಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹದ ಬಗ್ಗೆ ಸವಿವರವಾಗಿ ನಿರೂಪಿಸಿ
ಘನದಯಾನಿಧಿಯಾದ ಪವನರಾಯನೆ ನಮೋ ಎನ್ನುತ್ತ
ಜಾಗ್ರತ ಸ್ವಪ್ನ ಸುಷುಪ್ತಿಯಲ್ಲಿ ನೀನೆ | ಜಾಗರೂಕನಾಗಿ ಜೀವರ ಪಾಲಿಸಿ | ಭಾಗತ್ರಯದಲ್ಲಿ ವಿಭಾಗ ಮಾಡುವಿ | ಎಂದು ಶ್ರೀ ಪ್ರಾಣದೇವರ ಸ್ತೋತ್ರ ಮಾಡುತ್ತಾ,
ತಸ್ಮಾತ್ ತ್ವಮುತ್ತಿಷ್ಟ ಯಶೋಲಭಸ್ವ | ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಂ | ಮಯೈ ವೈತೇ ನಿಯತಾಃ ಪೂರ್ವ ಮೇವ | ನಿಮಿತ್ತ ಮಾತ್ರಂ ಭವ ಸವ್ಯ ಸಾಚಿನ್ | ಎನ್ನಿಂದ ಆದ ಕೃತ್ಯ ಆವಜ್ಞ ಮಾಡದಲೆ | ಉತ್ತರವ ಪೇಳುವದು | ಭಾವಾಭಿಜನ್ಯವಾದ ಅಹಂಕಾರವಾದರೊ | ಶ್ರೀವರ ನಿನ್ನಿಂದ ಪುಟ್ಟತೆನೆಗೆ | ಪಾವನ ಮಹಮಾ ಗುರುವಿಜಯವಿಠಲರೇಯ |
ಆವಪರಾಧ ಉಂಟು ತಿಳಿಸು ಪೇಳೋ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ ಬ್ರಹ್ಮಸ್ಥಾಬ್ರಹ್ಮಾನಾಮಾಸೌ ರುದ್ರಸ್ಥ ರುದ್ರನಾಮಾ ಎಮ್ಮನಾಮವು ನೀನೇ ಗುರುವಿಜಯವಿಠಲರೇಯಾ ಎಂದು ಪರಮಾತ್ಮನಲ್ಲಿ ಪರಿ ಪರಿಯಾಗಿ ನಿವೇದಿಸಿಕೊಳ್ಳುತ್ತ ಕರುಣಿಸಿ ವೃಷ್ಟಿಗರಿಯೋ ಕಮಲನಯನ | ನರಗಳ ಅಪರಾಧ ನೋಡದಲೆ ವೇಗದಲಿ ಎಂದು ಗುರುವೆ ನಿಮ್ಮಯ ಕರುಣವೃಕ್ಷ ನೆಳಲಾ | ಹೊರತಾದ ಕಾರಣದಿ ಹೀನನಾದೆ ಎಂದು ಬಾಲಕನ ಅಪರಾದ ಅನಂತವಿರಲಿನ್ನು ಮನ್ನಿಸು ದೇವರೆ ಹಾಟಕಾಂಬರ ಧರ ಗುರುವಿಜಯವಿಠಲರೇಯ ದಾಟುವರು ಇಲ್ಲ ನಿನ್ನ ಪ್ರಬಲ ಶಾಸನವ ಎನ್ನುವಲ್ಲಿ ದಾಸರಾಯರು ಮತ್ತೋಮ್ಮೆ ಪರಮಾತ್ಮನ ಗುಣಗಳನ್ನು ತಿಳಿಸುತ್ತಾರೆ.
ಹೀಗೆ ಶೇಷದಾಸರು ತಮ್ಮ ಸಾಹಿತ್ಯದಲ್ಲಿ ಬಹುವಿಧವಾಗಿ ಅಕ್ಷರಗಳ ಹೂಮಾಲೆಯೊಂದಿಗೆ ಪ್ರಮೇಯಭರಿತವಾದ ವಿಷಯಗಳನ್ನು ಪೂಣಿಸಿ ಪರಮಾತ್ಮನ ಲೀಲೆಗಳ ಸುಳಿವನ್ನು ನೀಡಿದ್ದಾರೆ.
ಸ್ಮರಿಸಿ ಬದುಕಿರೋ ಸರ್ವಾನಂದ ಗುರುಗಳ ನಿರುತದಿ ಇಷ್ಟ ಫಲವ ನೀಡೋ ವರಗಳ ಬೇಡಿ ಎಂದು ನಮಸ್ಕರಿಸುತ್ತಾ
ಪೂಷಿಸು ಎನ್ನಯ ದೋಷಗಳೆಣಿಸದೇ ದಾಸಾರಾಯ | ಶೇಷನಾಮಕನೆ ವಿ |ಷೇಶ ಜ್ಞಾನವ ನೀಯೊ ದಾಸರಾಯ ಎಂದು ಮನಃಪೂರ್ವಕವಾಗಿ ಬೇಡಿಕೊಳ್ಳುತ್ತಾರೆ.
ಶ್ರೀ ಶೇಷದಾಸರ ಕಾಲದಲ್ಲಿ ನಾವು ಯಾರು ಇರಲಿಲ್ಲ ಆದರೆ ಅವರನ್ನು ಅನನ್ಯವಾಗಿ ಭಕ್ತಿಯಿಂದ ಕಾಣುತ್ತಿದ್ದ,ಸ್ಮರಿಸುತ್ತಿದ್ದ ತಾತನವರ ಕಾಲಘಟ್ಟದಲ್ಲಿ ನಾವು ಇದ್ದೇವು,ಅವರ ಜೊತೆಗೆ ದಿನಗಳನ್ನು ಸವೆದವು ಎಂಬುದೇ ನಮ್ಮ ಜನ್ಮ ಜನ್ಮಾಂತರದ ಪುಣ್ಯ.
ದಾಸರಾಯರ ಮತ್ತು ತಾತನವರ ಅನುಗ್ರಹ ಸರ್ವರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
ಸಾಧಕರಿಗೆ ಅನುಕೂಲವಾಗಲೆಂದು ಶ್ರೀ ಶೇಷದಾಸರ ಸಮಗ್ರ ಸಾಹಿತ್ಯವನ್ನು ಯೂಟ್ಯೂಬ್ ನಲ್ಲಿ ಸಂಗ್ರಹಿಸಲಾಗಿದೆ.
https://youtube.com/playlist?list=PLvVFO5ll3vVgFcriMWLgrM921clnObvoN
ಧನ್ಯವಾದಗಳು.
ಪ್ರ.ಕು.ಜೋ
#sheshadasru #modalakallu