ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ - ವಿಶ್ವನಾಥ.ಡಿ. ಅರ್.
ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಯುವಜನತೆಗೆ ಪ್ರೇರಣೆ ವಿಶ್ವನಾಥ.ಡಿ. ಅರ್.
ಬನ್ನಿಕೋಡು, ಮೇ 16:
ಮಾ.ಸ.ಬ. ಕಾಲೇಜ್, ದಾವಣಗೆರೆ ಹಾಗೂ ಬನ್ನಿಕೋಡು ಗ್ರಾಮದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. (ರಾಷ್ಟ್ರೀಯ ಸೇವಾ ಯೋಜನೆ) ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಂಗಸ್ವಾಮಿ ಟಿ.ಆರ್. ವಹಿಸಿ, ವಿದ್ಯಾರ್ಥಿಗಳಿಗೆ ಲಭ್ಯವಾಗಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶೇಷ ಉಪನ್ಯಾಸದಲ್ಲಿ ಶ್ರೀ ವಿಶ್ವನಾಥ್ ಡಿ.ಆರ್., ಉಪನ್ಯಾಸಕರು ಹಾಗೂ ಪತ್ರಿಕಾ ವರದಿಗಾರರು, ಕೆ. ಬೇವಿನಹಳ್ಳಿ ಅವರು ಸ್ವಾಮಿ ವಿವೇಕಾನಂದ ಮತ್ತು ಯುವಜನತೆ ವಿಷಯದ ಕುರಿತು ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ವ್ಯಕ್ತಿತ್ವ ಹಾಗೂ ದೇಶಭಕ್ತಿ ಕುರಿತು ವಿವರಿಸಿ, ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಅನುಸರಿಸಿ ಉತ್ತಮ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಯುವಜನತೆ ತಮ್ಮ ಶಕ್ತಿಯನ್ನು ಸಮಾಜಸೇವೆ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು.
ಎದ್ದು ನಿಲ್ಲಿ, ಜಾಗ್ರತವಾಗಿರಿ, ಗುರಿ ಸಾಧಿಸುವ ತನಕ ನಿಲ್ಲಬೇಡಿ ಎಂಬ ಸ್ವಾಮಿ ವಿವೇಕಾನಂದರ ಅಮೂಲ್ಯ ವಾಕ್ಯವನ್ನು ಉಲ್ಲೇಖಿಸಿ, ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಗುರಿನಿಷ್ಠೆ ಬೆಳೆಸುವಂತೆ ಪ್ರೇರೇಪಿಸಿದರು.
ಶ್ರೀ ಎ. ಜಯಪ್ಪ ಅವರು ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳು ಸಮಾಜಸೇವೆ ಹಾಗೂ ಸಾಮಾಜಿಕ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಶ್ರೀ ಪಿ.ವಿ. ಸತೀಶ್ ಅವರು ಹಳ್ಳಿ ಜೀವನದ ಮಹತ್ವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಉಪನ್ಯಾಸ ನೀಡಿದರು.
ಉಪನ್ಯಾಸಕಿ ಕಾವ್ಯ ಶ್ರೀ ಅವರು ಮಹಿಳಾ ಸಬಲೀಕರಣದ ಕುರಿತು ಮಾತನಾಡಿ, ಮಹಿಳೆಯರು ಶಿಕ್ಷಣ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ವಾಗೀಶ್ ಸುದರ್ಶನ ಎಸ್.ಸಿ., ವಿಜಯ, ಹನುಮಂತಪ್ಪ ಯು., ಕೆ.ಎಸ್. ಬಸವರಾಜು, ಕೆ. ರೇವಣಸಿದ್ಧಪ್ಪ ಮುಂತಾದವರು ಭಾಗವಹಿಸಿದ್ದರು.
ಶಿಬಿರಾಧಿಕಾರಿಗಳಾದ ಡಾ. ರಾಘವೇಂದ್ರ ಹಾಗೂ ಡಾ. ಪ್ರವೀಣಕುಮಾರ್, ದೈಹಿಕ ನಿರ್ದೇಶಕರಾದ ಧನಂಜಯ್ ಹಾಗೂ ಉಪನ್ಯಾಸಕರಾದ ಶ್ರೀ ಶಾಂತಕುಮಾರ್ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡಿತು.-