ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ
ಮೈಸೂರು, ಮೇ 13 : ನವೋ ಪ್ರಮತಿ ಸಿವಿಲ್ ಸರ್ವಿಸಸ್ ಟ್ರೈನಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದು ಈ ಬಾರಿಯ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಕೇಂದ್ರ ಸೇವೆಗೆ ಆಯ್ಕೆಯಾದ ಜಿ. ಎಸ್. ಅಭಿಷೇಕ್ ನಾಯಕ್ ಹಾಗೂ ಸಾಗರ್ ಅಶ್ವಥಪ್ಪ ಅವರನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸರಿಯಾದ ಮಾರ್ಗದರ್ಶನ ಮತ್ತು ದೃಢಸಂಕಲ್ಪ ಅಗತ್ಯವೆಂದು ಹೇಳಿದರು. ಸಾಮಾನ್ಯ ವಿದ್ಯಾಭ್ಯಾಸಕ್ಕಿಂತ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ವಿಭಿನ್ನವಾಗಿದ್ದು, ಸೂಕ್ತ ತರಬೇತಿ ಮತ್ತು ಮಾರ್ಗದರ್ಶಕರ ನೆರವು ಅಭ್ಯರ್ಥಿಗಳಿಗೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು. ಕೆಲವೊಮ್ಮೆ ನಿರೀಕ್ಷಿತ ಅಂಕಗಳು ದೊರೆಯದಿದ್ದರೂ ಧೈರ್ಯ ಕಳೆದುಕೊಳ್ಳದೆ ಮುಂದುವರಿಯಬೇಕು. ನಿರಂತರ ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ಮುಖ್ಯಸ್ಥ ಹಾಗೂ ಮಾಜಿ ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್ ಮಾತನಾಡಿ, ಸವಾಲಿನ ಪರಿಸ್ಥಿತಿಗಳಲ್ಲಿಯೂ ಅನೇಕ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಉದಾಹರಿಸಿದರು. ಕನ್ನಡದಲ್ಲೇ ಪರೀಕ್ಷೆ ಬರೆದು ಯಶಸ್ಸು ಸಾಧಿಸಿರುವ ಅನೇಕ ಅಭ್ಯರ್ಥಿಗಳಿದ್ದಾರೆ ಎಂದು ಹೇಳಿ, ಭಾಷೆ ಅಡೆತಡೆ ಅಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು. ಉತ್ತಮ ಹುದ್ದೆಗಳನ್ನು ಪಡೆದ ನಂತರ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಯನ್ನು ಮರೆಯಬಾರದು ಎಂಬ ಸಂದೇಶವನ್ನೂ ಅವರು ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸೈನಿ ನವಾಲ್, ಲಕ್ಷ್ಮೀಪುರಂ ವೃತ್ತ ನಿರೀಕ್ಷಕ ರವಿಶಂಕರ್, ಬಿ. ರವಿಕುಮಾರ್, ಎಸ್. ಫಣಿರಾಜ್ ಹಾಗೂ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಹಲವು ಅಭ್ಯರ್ಥಿಗಳು ಉಪಸ್ಥಿತರಿದ್ದರು.