ಕೆ. ಬೇವಿನಹಳ್ಳಿಯ ಚೌಡೇಶ್ವರಿ ಭವ್ಯ ಮೆರವಣಿಗೆ ಹಾಗೂ ವಿಶೇಷ ಪೂಜಾ ವಿಧಿವಿಧಾನಗಳು
ಚೌಡೇಶ್ವರಿ ಭವ್ಯ ಮೆರವಣಿಗೆ ಹಾಗೂ ವಿಶೇಷ ಪೂಜಾ ವಿಧಿವಿಧಾನಗಳು.
ಹರಿಹರ ತಾಲ್ಲೂಕ್ ಕಾಶಿ ಬೇವಿನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಚೌಡೇಶ್ವರಿ ದೇವಿಯ ಜಾತ್ರೋತ್ಸವದ ಅಂಗವಾಗಿ ಏಪ್ರಿಲ್ 7ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವಪೂರ್ಣವಾಗಿ ಜರುಗಲಿವೆ.
ಬೆಳಗ್ಗೆ 6.45ಕ್ಕೆ ಗೌಡರ ಮನೆಯಿಂದ ಕಡಗ, ತಾಳಿ, ಸುತ್ತೋಲೆ, ಉಂಗ್ರ, ಸೀರೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ತಂದು ದೇವಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ದಿನಪೂರ್ತಿ ಭಕ್ತಾಧಿಗಳಿಗೆ ದೇವಿಗೆ ಉಡಿ ತುಂಬುವ ಅವಕಾಶ ಕಲ್ಪಿಸಲಾಗಿದೆ.
ಸಂಜೆ ವೇಳೆ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ದುರ್ಗಾಂಬಿಕಾ ದೇವಿಯರ ಭವ್ಯ ಮೆರವಣಿಗೆ ಸಕಲ ವಾದ್ಯಗೋಷ್ಠಿಗಳೊಂದಿಗೆ, ಸಿಡಿಮದ್ದುಗಳ ಸಿಡಿತದ ನಡುವೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಸಾಗಲಿದೆ. ಗಂಗಾ ಪೂಜೆಯ ನಂತರ ದೇವಿಯನ್ನು ಅಲಂಕರಿಸಲ್ಪಟ್ಟ ಭವ್ಯ ಪೆಂಡಾಲಿನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಈ ಸಂದರ್ಭದಲ್ಲಿ ಬಣಕಾರರ ಮನೆಯಿಂದ ಹೋಳಿಗೆ ಎಡೆ ತರಲಾಗುತ್ತದೆ. ಮಠದ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಮುಡಿ ಕಾರ್ಯಕ್ರಮ ನಡೆಯಲಿದ್ದು, ದೇವಿಗೆ ಎಡೆ ಅರ್ಪಣೆ ಮಾಡಲಾಗುತ್ತದೆ. ಬಳಿಕ ಸದ್ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಇದಲ್ಲದೆ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಹುಲಿಸಿನ ಜೋಳ ಮತ್ತು ಚೆರಗದ ಹೋಳ ತರಲಾಗುತ್ತದೆ. ತಳವಾರರ ಮನೆಯಿಂದ ‘ಘಟ’, ಹರಿಜನರ ಮನೆಯಿಂದ ‘ಘಟಿ’ ಹಾಗೂ ಕಣಕದ ಕೋಣ ತರಲಾಗುತ್ತದೆ. ನಂತರ ಸಾರು ಹಾಕುವ ವಿಧಿವಿಧಾನ ನೆರವೇರಲಿದೆ.
ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಜಾತ್ರಾ ಸಮಿತಿ ಮನವಿ ಮಾಡಿದೆ.