logo

ಬಾಂಗ್ಲಾ ಹಿಂದೂಗಳ ಮೇಲಿನ ಹಿಂಸೆ ಖಂಡಿಸಿ ತಾಳಿಕೋಟಿಯಲ್ಲಿ ಬೃಹತ್ ಪ್ರತಿಭಟನೆ

ತಾಳಿಕೋಟಿ:
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಹಿಂಸೆ ಹಾಗೂ ಕೊಲೆಗಳನ್ನು ಖಂಡಿಸಿ ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಹಿಂದೂ ಜನಜಾಗೃತ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ಶ್ರೀ ಬಸವೇಶ್ವರ ವೃತ್ತದವರೆಗೆ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಹಿಂದೂ ಸಮುದಾಯದ ಮೇಲಿನ ಹಿಂಸೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾಕಾರರು ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿಷ್ಯ ರತ್ನ ಪರಮಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು, ಸನಾತನ ಹಿಂದೂ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಕೊಡೆಕಲ್ ಬಸವಣ್ಣನವರ ನುಡಿಗಳಂತೆ ಸಾಧು-ಸಂತರ ಆಡಳಿತದ ಕಾಲ ಹತ್ತಿರದಲ್ಲಿದ್ದು, ಅದರ ಪ್ರತಿರೂಪವಾಗಿ ಯೋಗಿ ಆದಿತ್ಯನಾಥರು ಈಗಾಗಲೇ ಬಂದಿದ್ದಾರೆ ಎಂದರು. ಹಿಂದೂಗಳಿಗೆ ನ್ಯಾಯ ಸಿಗದಿದ್ದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೋರಾಟದಲ್ಲಿ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಭರವಸೆ ನೀಡಿದರು.
ಶರಣ ಸೋಮನಾಳದ ಶಿವಪುತ್ರ ಮಹಾಸ್ವಾಮಿಗಳು ಹಾಗೂ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಜೀವ ಮತ್ತು ಆಸ್ತಿಗೆ ಸಂಪೂರ್ಣ ಭದ್ರತೆ ಒದಗಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಕೇಂದ್ರ ಸರ್ಕಾರವು ರಾಜತಾಂತ್ರಿಕ ಒತ್ತಡ ಹೇರಬೇಕೆಂದು ಆಗ್ರಹಿಸಿದರು.
ಪೂಜ್ಯ ಮಹಾಂತಲಿಂಗ ಶಿವಾಚಾರ್ಯರು ಹಾಗೂ ಬಂಟನೂರಿನ ಮಾತೋಶ್ರೀಗಳ ಸಾನಿಧ್ಯದಲ್ಲಿ ತಹಸಿಲ್ದಾರ್ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹಿಂದೂ ಸಮಾಜದ ಮುಖಂಡರು, ಪಟ್ಟಣದ ನಾಗರಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಿಎಸ್ಐ ಜ್ಯೋತಿ ಖೋತ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ : SCN TV News, ತಾಳಿಕೋಟಿ

1
374 views