
ಡಾ.ಫ.ಗು.ಹಳಕಟ್ಟಿ ಜನ್ಮ ದಿನಾಚರಣೆ: ವಚನ ಸಂರಕ್ಷಣಾ ದಿನದ ಪ್ರಯುಕ್ತ ತಹಸೀಲ್ದಾರರಿಂದ ಪುಷ್ಪಾರ್ಚನೆ:
ಡಾ.ಫ.ಗು.ಹಳಕಟ್ಟಿ ಜನ್ಮ ದಿನಾಚರಣೆ: ವಚನ ಸಂರಕ್ಷಣಾ ದಿನದ ಪ್ರಯುಕ್ತ ತಹಸೀಲ್ದಾರರಿಂದ ಪುಷ್ಪಾರ್ಚನೆ:
ತಾಳಿಕೋಟಿ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಹಾಗೂ ವಚನ ಸಂರಕ್ಷಣಾ ದಿನದ ಅಂಗವಾಗಿ ಬುಧವಾರ ಪಟ್ಟಣದ ತಹಸೀಲ್ದಾರ ಕಾರ್ಯಾಲಯ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ತಹಸೀಲ್ದಾರ ಡಾ.ವಿನಯಾ ಹೂಗಾರ ಮಾತನಾಡಿ, ಡಾ.ಫ.ಗು.ಹಳಕಟ್ಟಿಯವರು ಕೇವಲ ಶರಣರ ವಚನಗಳನ್ನು ರಕ್ಷಿಸುವ ಕೆಲಸವನ್ನು ಮಾತ್ರ ಮಾಡಲಿಲ್ಲ, ಸಾಮಾಜಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ. ಅವರದು ನಮಗೆಲ್ಲರಿಗೂ ಮಾದರಿಯಾಗಬೇಕಾದ ಬದುಕು ಎಂದು ಹೇಳಿದರು. ವಿಜಯಪುರದ ಭೂತನಾಳ ಕೆರೆ ನಿರ್ಮಾಣ, ಪ್ರಸಿದ್ಧ ಬಿ.ಎಲ್.ಡಿ.ಇ ಸಂಸ್ಥೆ ಸ್ಥಾಪನೆ, ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಹಾಗೂ ಮಹಿಳೆಯರಿಗಾಗಿ ಮೂರು ಕನ್ನಡ ಶಾಲೆಗಳನ್ನು ತೆರೆದಿರುವುದು ಅವರ ವಿಶಿಷ್ಟ ಸೇವೆಗಳು ಎಂದರು.
ಕಸಾಪ ಗೌರವ ಕಾರ್ಯದರ್ಶಿ ಗಂಗಾಧರ ಕಸ್ತೂರಿ ಮಾತನಾಡಿ, ಡಾ.ಫ.ಗು.ಹಳಕಟ್ಟಿ ಅವರು ಶ್ರೇಷ್ಠ ಸಂಶೋಧಕರು, ಸಾಹಿತ್ಯ ಪ್ರಚಾರಕರು ಹಾಗೂ ಸಂಪಾದಕರಾಗಿದ್ದರು. ಅವರು ಬಸವಾದಿ ಶರಣರ ವಚನಗಳನ್ನು ರಕ್ಷಿಸಿ ಬೆಳೆಸಲು ತಮ್ಮ ಜೀವನವನ್ನು ಪಕೀರನಂತೆ ನಡೆಸಿದರು. ವಚನಗಳನ್ನು ಮುದ್ರಿಸಿ ಪ್ರಕಟಿಸಲು ತಮ್ಮ ಸ್ವಂತ ಮನೆಯನ್ನೂ ಮಾರಿಸಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸಿದರು. ಅವರ ಈ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಶ್ರೀಶೈಲ ಹುಕ್ಕೇರಿ, ಜಿ.ಜಿ.ಮದರಕಲ್ಲ, ಇಸಿಓ ಸುರೇಶ ಹಿರೇಮಠ, ಸಿ.ಆರ್.ಸಿ. ರಾಜು ವಿಜಾಪುರ, ಸಂಗಮೇಶ ಪಾಲ್ಕಿ, ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ಮಹಾಂತೇಶ ಮುರಾಳ, ಜಗದೀಶ ಬಿಳೇಬಾವಿ, ಅಶೋಕ ಚಿನಗುಡಿ, ಪ್ರಭು ಸಣ್ಣಕ್ಕಿ, ಡಾ.ಅನಿತಾ ಸಜ್ಜನ, ಮಹಾನಂದ ಉಮಾರ್ಜಿ, ಸುಮಂಗಲ, ಶೈಲಶ್ರೀ ಕಂಚಾಣಿ, ಮಹಾಂತಗೌಡ ದೊರೆಗೋಳ, ಮುನ್ನಾ ಅತ್ತಾರ ಮತ್ತಿತರರು ಉಪಸ್ಥಿತರಿದ್ದರು.