logo

ಕಸಾಪ ಸಂಸ್ಥಾಪನಾ ದಿನಾಚರಣೆ: ಮಹನೀಯರ ಸ್ಮರಣೆ ಕನ್ನಡ ನಾಡು, ನುಡಿ, ಜಲದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ : ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ

ವರದಿ: ಹೈದರ್ ಸಾಬ್

ದೇವನಹಳ್ಳಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ೧೦೫ ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ ೧೯೧೫ರಲ್ಲಿ ಆಗಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಪರ್ವತಪುರ ರಸ್ತೆಯಲ್ಲಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ೧೧೦ನೇ ಸಂಸ್ಥಾಪನಾ ದಿನದ ಅಂಗವಾಗಿ ನಿವೃತ್ತ ಶಿಕ್ಷಕ ಶ್ರೀರಾಮಯ್ಯ ಅವರಿಗೆ ಅಭಿನಂದಿಸಿ ಅವರು ಮಾತನಾಡಿದರು. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುವ ಈ ಕಾರ್‍ಯಕ್ರಮ ಅರ್ಥಪೂರ್ಣವಿದೆ. ಮೇ ೧೨ಕ್ಕೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು ೫೦ ವರ್ಷವಾಗುತ್ತದೆ. ಪರಿಷತ್ತಿನಿಂದ ಸುವರ್ಣ ಮಹೋತ್ಸವ ಆಚರಿಸಲಾಗುತ್ತದೆ. ಸಿ, ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಭಾಷಿಕರು ಬೇರೆ ಭಾಷೆ ಆಡಳಿತ ಅಧೀನದಲ್ಲಿದ್ದರು. ಈ ಸಂಕಟದಿಂದ ಹೊರಬರಲು ಕನ್ನಡ ಭಾಷೆ, ಪ್ರದೇಶ, ಸಂಸ್ಕೃತಿಯನ್ನು ಒಗ್ಗೂಡಿಸುವ, ಅದರ ಅಸ್ಮಿತೆಯನ್ನು ರಕ್ಷಿಸಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು, ಆ ವೇಳೆ ಕನ್ನಡ ಕಟ್ಟು ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ವೇಳೆ ಪ್ರಮುಖವಾಗಿ ನೆನೆಯಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಚಳುವಳಿಯ ಹರಿಕಾರರು, ಎಲ್ಲಾ ಊರುಗಳಲ್ಲಿ ಪ್ರಜಾಪ್ರಭುತ್ವದ ಗೌರವ ಸೃಷ್ಠಿಸಿದವರು. ರಾಜ್ಯಕ್ಕೆ ಬೇಕಾದ ಕಾರ್ಯಗಳು ಪ್ರಭುತ್ವದ ತೀರ್ಮಾನ ಆಗಬಾರದು, ಸಾರ್ವಜನಿಕ ಪ್ರತಿನಿಧಿಗಳು ಚರ್ಚಿಸಬೇಕು ಎನ್ನುವ ಕಾರಣಕ್ಕೆ ೧೯೦೯ರಲ್ಲಿ ಜನಪ್ರತಿನಿಧಿ ಸಮಿತಿ ರಚಿಸಿದ್ದರು. ಶಾಹು ಮಹಾರಾಜರನ್ನು ಬಿಟ್ಟರೆ ಪ್ರಜಾಪ್ರಭುತ್ವದೊಳಗೆ ರಾಜ್ಯಭಾರ ಮಾಡಿದ ಎರಡನೇ ರಾಜ ನಾಲ್ವಡಿ ಒಡೆಯರ್ ಎಂದ ಅವರು, ಆ ಕಾಲಕ್ಕೇ ಒಡೆಯರ್ ಸಾಮಾಜಿಕ ಅನಿಷ್ಠಗಳನ್ನು ನಿಷೇಧಿಸಿದರು. ದೇಶದಲ್ಲಿ ಸಂವಿಧಾನ ರಚನೆ ಆಗುವ ಮೊದಲೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದರು ಎಂದರು.

ಕಾರ್‍ಯಕ್ರಮದ ಅಧ್ಯಕ್ಷತೆವಹಿಸಿದ್ದ ತಾಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಂದಲೂ ಕನ್ನಡ ಉಳಿದಿದೆ. ಕನ್ನಡ ನಾಡು, ನುಡಿ, ಜಲದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಹಿಂದಿಗರಿಗೆ ಕನ್ನಡ ಭಾಷೆಯನ್ನು ಕಲಿಸುವ ಗುಣವನ್ನು ನಾವುಗಳು ರೂಢಿಸಿಕೊಳ್ಳಬೇಕು ಎಂದರು.
......................................................
ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟುಹಾಕಿದ ಮಹಾನೀಯರನ್ನು ಸ್ಮರಿಸಿಕೊಳ್ಳಬೇಕು. ಕನ್ನಡ, ಸಂಸ್ಕೃತಿಯ ಸೊಬಗನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ. ಇವರ ಆದರ್ಶಗಳನ್ನು ಪ್ರತಿ ಕನ್ನಡಿಗರು ಮೈಗೂಡಿಸಿಕೊಳ್ಳಬೇಕು.
- ಮುನಿರಾಜ್ (ಅಪ್ಪಯ್ಯ) | ಕಸಾಪ ಜಿಲ್ಲಾ ಕೋಶಾಧ್ಯಕ್ಷ
......................................................
ಈ ವೇಳೆ ಕಸಾಪ ದೇವನಹಳ್ಳಿ ತಾಲೂಕು ಕೋಶಾಧ್ಯಕ್ಷ ಹೊನ್ನವಳ್ಳಿ ರಾಮಾಂಜಿನಪ್ಪ, ಸುರೇಶಾಚಾರ್, ಗೌರವ ಕಾರ್ಯದರ್ಶಿ ಯಲಿಯೂರು ದೇವರಾಜ್, ಡಾ.ವೆಂಕಟರಾಜು, ಶರಣಯ್ಯಹೀರೆಮಟ್, ಅನಿಲ್ ಕುಮಾರ್, ಐ.ಟಿ.ರಾಮಾಂಜಿನಪ್ಪ, ಹಾರೋಹಳ್ಳಿ ಮಂಜುನಾಥ್, ರಾಮಣ್ಣ, ಭೈರೇಗೌಡ, ಸುಬ್ರಹ್ಮಣ್ಯ, ಗೋವಿಂದರಾಜು, ಪದಾಧಿಕಾರಿಗಳು ಇದ್ದರು.

20
1517 views