
ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ದೊಡ್ಡದು : ಪ್ರೇಮಾನಂದ ಯಲ್.ಬಿ
ಚಿಕ್ಕನಾಯಕನಹಳ್ಳಿ : “ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ಒಂದು ಕಾಲದಲ್ಲಿ ‘ಉದ್ಯೋಗಂ ಪುರುಷ ಲಕ್ಷಣಂ’ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರೇಮಾನಂದ ಯಲ್. ಬಿ ಹೇಳಿದರು.
ಆಲದಕಟ್ಟೆಯ ಸೇವಾಲಾಲ್ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆದ ಸ್ವ ಉದ್ಯೋಗ ಪ್ರೇರಣಾ ಶಿಬಿರದಲ್ಲಿ ಅವರು ಮಾತನಾಡಿದರು.
“ಅಡುಗೆ ಮನೆಯ ನಾಲ್ಕು ಗೋಡೆಗಳೊಳಗಿಂದ ಹೊರಗೆ ಬಂದು, ತಮ್ಮ ಜೀವನವನ್ನು ಸ್ವತಃ ರೂಪಿಸಿಕೊಳ್ಳುವ ಮಹಿಳಾ ಸಬಲೀಕರಣವೇ ನಮ್ಮ ಯೋಜನೆಯ ಉದ್ದೇಶ. ಸ್ವ ಉದ್ಯೋಗದ ಮೂಲಕ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ರೂಪ ರವರು ಸೀರೆಗೆ ಕುಚ್ಚು ಹಾಕುವುದು, ಮ್ಯಾಟ್ ತಯಾರಿ, ಮನೆ ಅಲಂಕಾರಿಕ ವಸ್ತು ತಯಾರಿ ಮತ್ತಿತರ ಸ್ವ ಉದ್ಯೋಗ ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಗ್ರಾಮ ಪಂಚಾಯತ್ ಸದಸ್ಯೆ ಅನಸೂಯಾ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷೆ ರತ್ನ ಬಾಯಿ, ಮೇಲ್ವಿಚಾರಕಿ ಆಶಾ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ರಂಜನ್, ವೀಣಾ ಸಹಕಾರ ನೀಡಿದರು.